ತ್ರಿಲೋಚನಪಾಲ
ಕ್ರಿ.ಶ. 10-11 ನೆಯ ಶತಮಾನಗಳಲ್ಲಿ ಭಾರತದ ವಾಯುವ್ಯ ಗಡಿಯಲ್ಲಿ ಪ್ರಬಲವಾಗಿದ್ದ ಶಾಹೀರಾಜ್ಯದ ಒಬ್ಬ ಪ್ರಮುಖ ದೊರೆ. ಈ ಸಂತತಿಯ ರಾಜರಾದ ಜೈಪಾಲ, ಆನಂದಪಾಲ ಮತ್ತು ತ್ರಿಲೋಚನಪಾಲ ಇವರು 997 ರಿಂದ 1022ರ ವರೆಗೆ ಘಜ್ನಿ ಮಹಮೂದನ ದಾಳಿಗಳನ್ನು ವೀರಾವೇಶದಿಂದ ಎದುರಿಸಿದರು. 1008ರಲ್ಲಿ ಆನಂದಪಾಲ ತರುವಾಯ ಅವನ ಮಗ ತ್ರಿಲೋಚನಪಾಲ ರಾಜನಾದ. ತನ್ನ ತಂದೆ ಹಾಗೂ ತಾತನಂತೆ ತ್ರಿಲೋಚನಪಾಲನೂ ಮಹಮೂದನ ದಾಳಿಗಳನ್ನು ಎದುರಿಸಿದ. 1014ರಲ್ಲಿ ತ್ರಿಲೋಚನಪಾಲ ಘಜ್ನಿ ಮಹಮೂದನಿಂದ ಪರಾಜಿತನಾದಗ್ಯೂ ಧೃತಿಗೆಡದೆ ಕಾಶ್ಮೀರಕ್ಕೆ ಹೋಗಿ ಅಲ್ಲಿಯ ದೊರೆ ಸಂಗ್ರಾಮರಾಜನ ಸಹಾಯದಿಂದ ಮಹಮೂದನನ್ನು ಎದುರಿಸಲು ಸಿದ್ಧನಾದ. ಮಹಮೂದನಿಂದ ಮತ್ತೆ ಪರಾಜಿತವಾದ. ಮತ್ತೆ ಇತರ ರಾಜರ ಸಹಾಯದಿಂದ ಹೋರಾಟ ಮುಂದುವರಿಸಿದ. ರಾಹುತ್ ಅಥವಾ ರಾಮಗಂಗ ನದಿಯ ಬಳಿ ಮತ್ತೆ ಪರಾಜಿತನಾದ. ಮಹಮೂದನ ಎಡೆಬಿಡದ ದಾಳಿಗಳಿಂದ ಶಾಹೀ ರಾಜ್ಯ ಹಾಳಾಯಿತು. ಅನಂತರ ತ್ರಿಲೋಚನಪಾಲ ಪಂಜಾಬಿನ ಪೂರ್ವಭಾಗದ ಶಿವಾಲಿಕ್ ಬೆಟ್ಟಗಳ ಪ್ರದೇಶದಲ್ಲಿ ರಾಜ್ಯವನ್ನು ಸ್ಥಾಪಿಸಿಕೊಂಡು ಆಳತೊಡಗಿದ. ಸ್ವಲ್ಪ ಕಾಲಾನಂತರ ಇವನು ತನ್ನ ನೆರೆಶತ್ರುಗಳಿಂದ 1022 ರಲ್ಲಿ ಕೊಲೆಗೀಡಾದನೆಂದು ಕಾಣುತ್ತದೆ. ಅನಂತರ ಇವನ ಮಗ ಭೀಮಪಾಲ ಪಟ್ಟವೇರಿದ.		(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ